Saturday, 6 April 2013

ಜನಪ್ರಿಯವಾಗುತ್ತಿರುವ ಪಾದಯಾತ್ರೆಗಳು
ವಾಹನ ಸಾರಿಗೆ ವ್ಯವಸ್ಥೆ ತುಂಬಾ ವಿರಳವಾಗಿದ್ದ ದಿನಗಳಲ್ಲಿ ಜನರು ದೂರದ ಊರುಗಳಿಗೂ ನಡೆದುಕೊಂಡೇ ಪ್ರಯಾಣ ಮಾಡುತ್ತಿದ್ದರು. ಸುಮಾರು ಮೂರು ನಾಲ್ಕು ದಶಕಗಳಿಗೂ ಹಿಂದೆ ನಡೆದು ಪ್ರಯಾಣ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು.
ನಮ್ಮ ಊರಿನಲ್ಲಿ ಒಬ್ಬರು ಹೊಳೆನರಸೀಪುರಕ್ಕೆ ಕೋರ್ಟಿಗೆ ಹಾಜರಾಗಲು ರಾತ್ರಿ ಬುತ್ತಿ ಕಟ್ಟಿಕೊಂಡು ಹೊರಟು ಕೋರ್ಟು ಪ್ರಾರಂಭವಾಗುವ ವೇಳೆಗೆ ಅಲ್ಲಿಗೆ ತಲುಪುತ್ತಿದ್ದರಂತೆ. ನೀರು ಸಿಕ್ಕ ಕಡೆ ಬುತ್ತಿಯಲ್ಲಿನ ಆಹಾರ ತಿಂದುಕೊಂಡು ಅವರು ಪ್ರಯಾಣ ಮಾಡುತ್ತಿದ್ದರು. ಕೆಲವರು ಮೈಸೂರಿಗೂ ಕೋರ್ಟಿಗೆ ಹೋಗಲು ನಡೆದೇ ಹೋಗುತ್ತಿದ್ದರಂತೆ. 
ನಾನು ಚಿಕ್ಕವನಿದ್ದಾಗ ನಮ್ಮ ತಾಲೂಕಿನ ಜನರು ಹಾಸನ, ಬೇಲೂರು, ಸಕಲೇಶಪುರ ತಾಲೂಕುಗಳಿಗೆ ಆಲೆಮನೆ ತೆಗೆದುಕೊಂಡು ಹೋಗಿ ಕಬ್ಬಿನ ಗದ್ದೆಗಳಲ್ಲಿ ಆಲೆಮನೆ ಹಾಕಿ ಬೆಲ್ಲ ಮಾಡಿಕೊಟ್ಟು ಬರುತ್ತಿದ್ದುದುಂಟು. ಸುಮಾರು ಡಿಸೆಂಬರ್, ಜನವರಿ ತಿಂಗಲ್ಲಿ ಚನ್ನರಾಯಪಟ್ಟಣದಿಂದ ಬೇಲೂರಿನ ರಸ್ತೆಯಲ್ಲಿ ದಾರಿಯುದ್ದಕ್ಕೂ ಎತ್ತಿನ ಗಾಡಿಯ ಮೇಲೆ ಗಾಣಗಳು, ಕೊಪ್ಪರಿಗೆ ತುಂಬಿಕೊಂಡು ಎತ್ತುಗಳನ್ನು ನಡೆಸಿಕೊಂಡು ಹೋಗುವವರೇ ಸಿಗುತ್ತಿದ್ದರು. ಎರಡು ಮೂರು ದಿನಗಳ ಪ್ರಯಾಣ ಮಾಡಿ ಅವರು ಅಲ್ಲಿಗೆ ತಲುಪುತ್ತಿದ್ದರು. ಮಾರ್ಗ ಮಧ್ಯದಲ್ಲಿ ಅನುಕೂಲವಾದ ಕಡೆ ವಾಸ್ತವ್ಯ ಹೂಡುತ್ತಿದ್ದರು, ಅಲ್ಲಿಯೇ ಅಡುಗೆ ಮಾಡಿ ಆಹಾರ ತಯಾರಿಕೊಳ್ಳುತ್ತಿದ್ದರು. ಏಪ್ರಿಲ್,ಮೇ ತಿಂಗಳಲ್ಲಿ ಆ ತಂಡಗಳು ಮತ್ತೆ ಚನ್ನರಾಯಪಟ್ಟಣದ ಕಡೆಗೆ ವಾಪಸಾಗುವುದನ್ನು ಕಾಣಬಹುದಿತ್ತು. ಇವೆಲ್ಲ ಜೀವನದ ಅಗತ್ಯಗಳಿಗಾಗಿ ಮಾಡುತ್ತಿದ್ದ ನಡಿಗೆ ಆಗಿತ್ತು. ನಾನೂ 5 ನೇ ತರಗತಿಯಲ್ಲಿದ್ದಾಗ ಬೇಲೂರಿನಿಂದ ನಮ್ಮ ಊರಿಗೆ ನಡೆದುಕೊಂಡು ಆಲೆಮನೆ ತಂಡದೊಂದಿಗೆ ಬಂದಿದ್ದೆನು. ಅದೊಂದು ಕಷ್ಟಕರ ಹಾಗೂ ರೋಚಕ ಅನುಭವ!. ನಾವು ಸಾಮಾನು ಸಾಗಿಸಿಕೊಂಡು ಬೇಲೂರು ಪಟ್ಟಣದ ನಡುವೆ ಇರುವ ಹೆಗಚಿ ನದಿಯನ್ನು ದಾಟುತ್ತಿದ್ದಾಗ ಮಳೆ-ಗಾಳಿ ಎಷ್ಟೊಂದು ಪ್ರಖರವಾಗಿತ್ತೆಂದರೆ ನಾವು ಮುಂದೆ ನಡೆಯುತ್ತಿದ್ದರೆ ಗಾಳಿ ನಮ್ಮನ್ನು ಹಿಂದೆ ತಳ್ಳುತ್ತಿತ್ತು. ಕತ್ತಲೆ ಬೇರೆ!. ಹೇಗೋ ಸೇತುವೆ ದಾಟಿ ಒಂದು ಮನೆಯ ಮುಂದಿನ ಹಜಾರದಲ್ಲಿ ಮಲಗಿ, ಅಲ್ಲಿಯೇ ನಮ್ಮ ಹಸುಗಳನ್ನು ಕಟ್ಟಿಕೊಂಡು ಮೇವು ಹಾಕಿ ರಾತ್ರಿ ಕಳೆದೆವು. ಮಾರ್ಗ ಮಧ್ಯದಲ್ಲಿ ತೆರೆದ ಬಾವಿ ಸಿಕ್ಕ ಕಡೆ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದೆವು. ಹೋಟೆಲ್ಲುಗಳಿದ್ದರೂ ಅಲ್ಲಿ ಊಟ ಮಾಡುವುದು ದುಬಾರಿ ಎಂಬ ಭಾವನೆ ಆದಿನಗಳಲ್ಲಿ.
ಕಾಲ ಬದಲಾದಂತೆ ಐದು ಆರು ತಂಡಗಳು ಒಟ್ಟಿಗೆ ಸೇರಿ ಗಾಣಗಳನ್ನು ಲಾರಿಗಳಲ್ಲಿ ಸಾಗಿಸಿ ಕೆಲವರು ಬಸ್ಸಿನಲ್ಲಿ ಪ್ರಯಾಣಿಸಿ ಹಸುಗಳನ್ನು ಸಾಗಿಸುವವರು ಮಾತ್ರ ನಡೆಯುತ್ತಿದ್ದರು. ಮುಂದೆ ಕ್ರಷರ್ ಬಂದ ನಂತರ ಆಲೆಮನೆಗಳಲ್ಲಿ ಹಸುಗಳ ಬಳಕೆ ನಿಂತು ಎಲ್ಲರೂ ವಾಹನಗಳಲ್ಲೇ ತೆರಳುವಂತಾದರು. ಈಗ ಕಾಲ ಇನ್ನೂ ಬದಲಾಗಿದೆ. ಆ ಪ್ರದೇಶದಲ್ಲಿ ಕಬ್ಬು ಬೆಳೆಯುವುದೇ ಕಡಿಮೆಯಾಗಿ ಈಗ ಅಲ್ಲಿಗೆ ಹೋಗುವವರೂ ವಿರಳ.
ದೂರದ ಸ್ಥಳಗಳನ್ನು ತಲುಪಲು ನಡಿಗೆ ಹೇಗೆ ಅನಿವಾರ್ಯವಾಗಿತ್ತು ಎಂಬುದನ್ನು ಹೇಳಲು ಇದೊಂದು ಉದಾಹರಣೆಯಷ್ಟೇ. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇದ್ದವರೂ ಅಂದಿನ ದಿನಗಳಲ್ಲಿ ತಿರುಪತಿಗೆ ನಡೆದುಕೊಂಡೇ ಹೋಗುತ್ತಿದ್ದರು. ನಂತರ ಪ್ರಾರಂಭದ ಐದಾರು ಹಳ್ಳಿಗಳಲ್ಲಿ ಸಂಚರಿಸಿ ನಂತರ ಬಸ್ಸು ಹಿಡಿದು ಹೋಗುತ್ತಿದ್ದರು. ಬರುಬರುತ್ತಾ ನಡೆದು ಹೋಗುವುದು ನಿಂತೇ ಹೋದಂತಾಯಿತು. ಪುಟ್ಟ ದೂರಕ್ಕೂ ವಾಹನವನ್ನು ಆಶ್ರಯಿಸುವುದು ಪ್ರಾರಂಭಗೊಂಡಿತು. ಇದು ಆರೋಗ್ಯದ ಮೇಲೆ ನಕಾರಾತ್ಮಕವಾದ ಪರಿಣಾಮವನ್ನುಂಟು ಮಾಡಿದ ಕಾರಣ ವೈದ್ಯರು ಬೆಳಿಗ್ಗೆ ವಾಕ್ ಮಾಡಿ ಎಂಬ ಸಲಹೆ ನೀಡುವುದು ಸಾಮಾನ್ಯವಾಗಿ ಹೋಯಿತು.
ಇದೆಲ್ಲದರ ನಡುವೆ ಜನರಿಗೆ ನಡೆಯುವ ಹುಮ್ಮಸ್ಸು ಮತ್ತೆ ಮರುಕಳಿಸಿದೆ. ಅದು ಅನಿವಾರ್ಯತೆಯಿಂದಲ್ಲ. ಒಂದು ರೀತಿಯ ನಂಬಿಕೆ ಹಾಗೂ ಕ್ರೇಜ್ ಗಾಗಿ ಎಂದು ಹೇಳಬಹುದು. ಬೆಂಗಳೂರಿನಿಂದ ಶಿವರಾತ್ರಿ ವೇಳೆ ಕಾಲು ನಡಿಗೆ ಮೂಲಕ ಧರ್ಮಸ್ಥಳಕ್ಕೆ ಹೋಗುವುದನ್ನು ಯಾರೋ ಕೆಲವರು ಪ್ರಾರಂಭಿಸಿದರು. ಇದು ವಿಸ್ತರಿಸುತ್ತಾ ಹೋಗಿ ಸಾವಿರಾರು ಜನ ಪಾದಯಾತ್ರೆ ಮಾಡುವಂತಾದರು. ಬೆಂಗಳೂರಿನವರು ನಡೆದು ಸಾಗುವುದನ್ನು ಕಂಡ ಮಾರ್ಗ ಮಧ್ಯದ ಗ್ರಾಮಗಳ ಜನರೂ ಸಹ ಪಾದಯಾತ್ರೆಯನ್ನು ಸೇರಿಕೊಂಡು ಮತ್ತಷ್ಟು ವಿಸ್ತರಣೆಗೊಂಡಿತು.
ಇಂದು ಕೆಂಪು ವಸ್ತ್ರವನ್ನು ಹೊದ್ದ ಕೆಲವು ಪುರುಷರು, ಮಹಿಳೆಯರು ರಸ್ತೆಗುಂಟ ನಡೆದು ಸಾಗುತ್ತಿದ್ದುದನ್ನು ಕಂಡೆ. ಇದು ಶಿವರಾತ್ರಿಯ ಸಮಯವೂ ಅಲ್ಲ. ಚುನಾವಣೆ ಪ್ರಚಾರಕ್ಕೆ ಹೊರಟಿದ್ದಾರಾ ಅಂದೊಕೊಂಡರೆ ಅದೂ ಅಲ್ಲ! ಕುತೂಹಲ  ತಡೆಯಲಾಗದೇ ಕುತೂಹಲದಿಂದ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಒಬ್ಬರನ್ನು ಪ್ರಶ್ನಿಸಿದೆ. ಸಿದ್ಧಗಂತೆ ಸ್ವಾಮೀಜಿಯವರ 106ನೇ ಜನ್ಮದಿನೋತ್ಸವದಲ್ಲಿ ಭಾಗಿಗಳಾಗಲು ಪಾದಯಾತ್ರೆಯಲ್ಲಿ  ತೆರಳುತ್ತಿದ್ದೇವೆ, ನಾಡಿದ್ದು ಅಲ್ಲಿಗೆ ತಲುಪುತ್ತೇವೆ ಎಂದರು. ಇದೇ ರೀತಿಯಲ್ಲಿ ಮಹರಾಷ್ಟ್ರದ ಕೊಲ್ಲಾಪುರ, ಸೋಲಾಪುರ, ಕರ್ನಾಟಕದ ಬೀದರ್, ಗುಲ್ಬರ್ಗದ ಕಡೆಯ ಜನರು ಶ್ರೀ ಶೈಲಕ್ಕೆ ನಡೆದು ಸಾಗುವುದನ್ನೂ, ಕರ್ನಾಟಕ, ಆಂಧ್ರ, ತಮಿಳುನಾಡಿನ ಕೆಲವರು ಅಯ್ಯಪ್ಪ ದೇವಸ್ಥಾನಕ್ಕೆ ನಡೆದು ಸಾಗುವುದನ್ನೂ ಕಾಣುತ್ತೇವೆ.
ಏನಕೇನ ಪ್ರಕಾರೇಣ ಎನ್ನುವಂತೆ ಕಾರಣ ಏನೇ ಇರಲಿ, ಜನರಿಗೆ ನಡೆಯುವ ಹುಚ್ಚು/ಆಸಕ್ತಿ ಬಂದಿರುವುದಂತೂ ನಿಜ. ಇದು ಆಗಲೇ ಹೇಳಿದಂತೆ ಹಿಂದಿನ ದಿನಗಳಂತೆ ಅನಿವಾರ್ಯ ಅಗತ್ಯಕ್ಕಾಗಿಯಲ್ಲ. ಭಕ್ತಿ/ನಂಬಿಕೆ/ಕ್ರೇಜ್ ಗಾಗಿ ನಡೆಯುತ್ತಿದೆ. ಏನೇ ಆಗಲಿ, ಜನರಿಗೆ ನಡೆಯವ ಅನುಭವ ಮರೆತೇ ಹೋಗುತ್ತಿದೆ ಎಂದುಕೊಳ್ಳುತ್ತಿದ್ದ ದಿನಗಳಲ್ಲಿ ದಿನಗಟ್ಟಲೆ ದೂರದ ಸ್ಥಳಕ್ಕೆ ಪಾದಯಾತ್ರೆಯ ಮೂಲಕ ಸಾಗುವ ಆಸಕ್ತಿ  ಜನರಲ್ಲಿ ಹುಟ್ಟಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನಬಹುದಾಗಿದೆ.

ಈ.ಬಸವರಾಜು
ಮಲ್ಲೇನಹಳ್ಳಿ, ಚನ್ನರಾಯಪಟ್ನ ತಾಲೂಕು
ಮಂದಾರ, 4ನೇ ಮುಖ್ಯ ರಸ್ತೆ, ರುಕ್ಮಿಣಿನಗರ
ನಾಗಸಂದ್ರ ಅಂಚೆ, ಬೆಂಗಳೂರು-73
9448957666


--
E.Basavaraju
Mandara, 4th main, Rukmininagar
Nagasandra post,  Bangalore-560012
9448957666

No comments:

Post a Comment