ನಿಷ್ಠ-ಅನಿಷ್ಠ
ಯಣ್ಣ, ನಿಷ್ಠ ಅಂದ್ರೇನು?
ನಿಷ್ಠ ಅಂದ್ರೆ ಏಳಿದಂಗೆ ಕೇಳಿಕಂಡಿರದು. ನಿಯತ್ತಾಗಿರದು ಅಂತವ.
ಅನಿಷ್ಠ ಅಂದ್ರೆ?
ಅನಿಷ್ಠ ಅಂದ್ರೆ ಏಳಿದಂಗೆ ಕೇಳ್ದೇ ಇರದು, ನಿಯತ್ತಿಲ್ದಂಗಿರದು. ಏತಿ ಅಂದ್ರೆ ಪ್ರೇತಿ ಅನ್ನದು. ಅನಿಷ್ಠ ಮುಂಡೇದು ಅಂತ ಬೈಯ್ಯದ ಕೇಳಿಲ್ವೆ?
ಸದಾನಂದಗೌಡ ಯಡೂರಪ್ಪುಂಗೆ ನಿಷ್ಠನೋ ಇಲ್ಲ ಅನಿಷ್ಠನೋ?
ಏನಣ್ಣ, ನೀನು ವಳ್ಳೆ ಪೋಲೀಸ್ನರ್ ತರ ಕ್ವಚನ್ ಮಾಡ್ತಾ ಇದ್ದೀಯ? ಸದಾನಂದಗೌಡ ಮದ್ಲು ಯಡೂರಪ್ಪುಂಗೆ ನಿಷ್ಠ ಆಗಿದ್ದ, ಈಗ ಅನಿಷ್ಠ ಆಗಿರಂಗೆ ಕಾಣ್ತಾ ಅವ್ನೆ.
ಅದ್ಯಾಕಂಗಾಗಿಬುಟ್ಟ?
ಯಾಕೆ ಅಂದ್ರೆ ಚೀಪ್ ಮಿನಿಷ್ಟ್ರು ಕುರ್ಚಿ ಅಂಗಿದ್ದತಂತೆ. ಒಂತರ ವಿಕ್ರಮಾದಿತ್ಯನ ಸಿಂಹಾಸನ ಇದ್ದಂಗೆ. ಅಲ್ಲಿ ಕೂತ್ರೆ ಬುದ್ದಿ ಇದ್ದಂಗಿರದಿಲ್ವಂತೆ. ಕ್ಯಳಿಕೆ ಇಳ್ಯಕಂತು ಮನ್ಸೇ ಬರದಿಲ್ವಂತೆ. ಜ್ವತಿಗೆ ಏಳ್ಕೆ ಮಾತು ಬ್ಯಾರೆ! ಸುಮ್ನೆ ಕುರ್ಚಿ ಬುಡದಂಗೆ ಕೂತ್ಕಳಯ್ಯ, ಉಳಿದದ್ದ ನಾನು ನೋಡ್ಕತಿನಿ ಅಂತ ಯಾರೋ ಏಳಿದ್ದರಂತೆ. ಅಂಗಾಗಿ ಅವ್ನು ಕುರ್ಚಿ ಬುಡ್ತಾ ಇಲ್ಲ, ಅದ್ಕೆ ಅನಿಷ್ಠ ಆಗ್ಯವ್ನೆ. ಆಯ್ತು ಇದ್ಯಲ್ಲಾನೂ ಈಗ ಯಾಕೆ ಕೇಳ್ತಾ ಇದ್ದೀಯ, ನಿಂಗೆ ಯಾರ್ಯಾರ ಕೈ ಕೊಟ್ರೆ?
ಅಂಗೇನಿಲ್ಲ ಕಣಣ್ಣ, ನಂಗೆ ನಿಷ್ಠರಾಗಿರೋ ವಬ್ರುನ್ನ ಮುಖ್ಯಮಂತ್ರಿ ಮಾಡಿ ಅಂತ ಯಡೂರಪ್ಪ ಬೀಜೇಪಿ ಲೀಡ್ರುಗಳಿಗೆ ಏಳ್ತಾ ಅವ್ರಂತೆ, ಅದ್ಕೆ ಡೌಟು ಬಂದು ಕೇಳ್ದೆ. ಸದಾನಂದಗೌಡ್ನೂ ಯಡೂರಪ್ಪಂಗೆ ನಿಷ್ಟ ಆಗಿದ್ನಂತಪ್ಪ. ಅದ್ಕೆ ಅಲ್ವೆ ಗೌಡುನ್ನೇ ಮುಖ್ಯಮಂತ್ರಿ ಮಾಡಿ ಅಂತ ಓರಾಟ ಮಾಡಿ ಆಕಿಸ್ಕಂಡುದ್ದು.
ಅದು ಅವತ್ತಿನ್ ವಿಚಾರ. ಮನ್ಸ ಇವತ್ತಿದ್ದಂಗೆ ನಾಳಿಕ್ಕಿರದಿಲ್ಲ. ಅವತ್ತು ಸದಾನಂದಗೌಡ ಯಡೂರಪ್ಪುಂಗೆ ನಿಯತ್ಗಾರ ಆಗಿದ್ದ. ಅದ್ಕೆ ಯಡೂರಪ್ಪ ಅವ್ನೇ ಇರ್ಬೇಕು ಅಂತ ಸೀಟಿಗೆ ತಂದು ಕುಂಡ್ರಿಸಿದ. ಆದ್ರೆ ಈಗ ಅವ್ನೆ ಯಡೂರಪ್ಪುಂಗೆ ಅನಿಷ್ಠ ಆಗಿ ಬುಟ್ಟವ್ನಂತೆ. ಅದ್ಕೆ ಯಡೂರಪ್ಪ ಇನ್ವಬ್ಬ ನಿಷ್ಠುನ್ನ ಉಡುಕ್ತಾ ಇದ್ದರಂತೆ.
ಅವ್ನೂ ಅನಿಷ್ಠ ಆಗಿಬುಟ್ರೆ?
ವಸ ನಿಷ್ಠನ್ನು ಉಡುಕದು.
ನೀನೇಳದ ನೋಡಿದ್ರೆ ಇದ್ಯಾಕೋ ಮುಗಿಯಂಗೆ ಕಾಣ್ತಾ ಇಲ್ಲ. ಜ್ವತಿಗೆ ನಿಷ್ಟರು ಸಿಗದೇ ಕಷ್ಟ ಅನುಸ್ತಾ ಅದಪ್ಪ.
ನೋಡು, ಈ ಅದಿಕಾರ, ಅಂತಸ್ತು ಸಿಕ್ಕಿದ್ರೆ ಜನ ಇದ್ದಕ್ಕಿದ್ದಂಗೆ ಚೇಂಜ್ ಆಗಿಬುಡ್ತರೆ. ಅಂಗಾಗಿ ಯಾರ್ನೂ ನಂಬಬಾರ್ದು. ನೀನು ಯಾರ್ಯಾರ ನಿಷ್ಟ್ರು ಸಿಕ್ಕಿದ್ರು ಅಂತವ ಕಣ್ಮುಚ್ಚಿಕಂಡು ಏನಾರ ಕೊಟ್ಟಿಯ ಉಸಾರು.
ನನ್ನತ್ರ ಕೊಡಕೇನಿದ್ದತಣ್ಣ?
ಈ ಕಾಲ್ದಲಿ ಜನ ಇಂತದ್ದೇ ಸಿಕ್ಬೇಕು ಅಂತ ಇಲ್ಲ. ಏನ್ ಸಿಕ್ಕಿದ್ರೆ ಅದ್ನೇ ಮಡಿಕ್ಯಂಡ್ ಬುಡ್ತರೆ. ಅದು ಈಗಲ್ಲ. ಬಾಳ ಹಿಂದಿನ್ ಕಾಲ್ದಿಂದಲೂ ನಡಕಂಡು ಬಂದದೆ.
ಹಿಂದಿನ್ ಕಾಲ್ದಲ್ಲಿ ನಿಯತ್ತು ಅನ್ನದು ಜಾಸ್ತಿ ಇತ್ತಂತೆ, ನೀನು ನೋಡಿದ್ರೆ ಇಂಗಂತಿಯ!
ಹಿಂದಿನ್ ಕಾಲ್ದಲ್ಲೂ ಜನ ಇಂಗೇ ಇದ್ರು ಅನ್ನದ್ಕೆ ಒಂದ್ ಕತೆ ಏಳ್ತಿನಿ ಕೇಳು. ವಬ್ಬ ಇಂಗೆ ಯಾಪಾರ ಮಾಡಿಕಂಡು ಇದ್ನಂತೆ. ಯಾಕೋ ಯಾಪಾರ ಡೌನ್ ಆಗಿಬುಡ್ತಂತೆ. ಅವನತ್ರ ಇದ್ದ ತಕ್ಕಡಿಯ ಪಕ್ಕದ ಅಂಗಡಿಯವ್ರಿಗೆ ಮಡಿಕಂಡಿರಿ, ನಾನು ಬಂದ್ ಮ್ಯಾಲೆ ಕೊಡಿವ್ರಿ ಅಂತ ಕೊಟ್ಟು ದೇಶಾಂತ್ರ ಓದ್ನಂತೆ. ಬಾಳ ವರ್ಸ ಆದ್ಮ್ಯಾಲೆ ವಾಪಸ್ ಬಂದು ನನ್ ತಕ್ಕಡಿ ಕೊಡಪ್ಪ ಅಂದ್ನಂತೆ. ತಕ್ಕಡಿ ಮಡಿಕಂಡಿದ್ದವ್ನು ತಕ್ಕಡಿಯ ಇಲಿ ತಿಂದ್ಕಂಡೋಯ್ತು ಅಂದ್ನಂತೆ. ಸರಿ ಆಯ್ತು ಬುಡಪ್ಪ, ಸಲ್ಪ ವಳೆಕಡಿಕೋಗಿ ಸ್ನಾನ ಮಾಡಿಕಂಡ್ ಬತ್ತಿನಿ, ಜ್ವತಿಗೆ ನಿಮ್ ಉಡುಗ್ನ ಕಳ್ಸಪ್ಪ ಅಂದ್ನಂತೆ. ಸ್ನಾನ ಮಾಡಿಕಂಡು ವಾಪಸ್ಸು ಬರ್ವಾಗ ವಬ್ನೆ ಬಂದ್ನಂತೆ. ಎಲ್ಲಪ್ಪ ನಮ್ ಉಡ್ಗ ಅಂದ್ರೆ, ನಿಮ್ ಉಡುಗನ್ನ ಹದ್ದು ಒತ್ಕಂಡೋಯ್ತು ಅಂದ್ನಂತೆ. ಏನಯ್ಯ? ಎಲ್ಲಾರ ಹದ್ದು ಉಡುಗುನ್ನ ಒತ್ಕಂಡೋದತೆ? ಅಂತ ಆ ಉಡುಗ್ನ ಅಪ್ಪ ಕೇಳಿದ್ನಂತೆ. ಮತ್ತೆ ಇಲಿ ತಕ್ಕಡಿ ತಿನ್ನಕಾದತೆ ಅಂತ ಅವ್ನು ಕೇಳಿದ್ನಂತೆ. ಆಗ ವಳಗೆ ಮಡಗಿದ್ದ ತಕ್ಕಡಿಯ ತಂದು ಕೊಟ್ನಂತೆ. ಅಂಗೆ ಇದು ಹಿಂದಿನ್ ಕಾಲ್ದಿಂದಲೂ ಅದೆ.
ಅದ್ಕೆ ಯಾರಿಗೆ ಏನೇ ಕೊಡ್ಬೇಕಾದ್ರೆ ಚಾಪೆ ಕಾಗದದ ಮ್ಯಾಲೆ ಬರಿಸ್ಕಂಡು ಕೊಡ್ಬೇಕು, ಬಾಸೆ ಪ್ರಮಾಣ ಅಂತ ಓದ್ರ್ರೆ ಯಡೂರಪುನ್ ಕತೆಯಾಯ್ತದೆ.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಈಮೇಲ್: ebಚಿsಚಿvಡಿಚಿರಿu@gmಚಿiಟ.ಛಿom
9448957666
E.Basavaraju
Mandara, 4th main, Rukmininagar
Mandara, 4th main, Rukmininagar
Nagasandra post, Bangalore-560012
9448957666
No comments:
Post a Comment