"ಬೈರಪ್ಪನ ಗೋಳು" ಎಂಬ ಸಾಮಾಜಿಕ ನಾಟಕ !!!
ಯಣ್ಣ, "ಬೈರಪ್ಪನ ಗೋಳು" ಅನ್ನೋ ನಾಟ್ಕ ನೋಡಿದ್ದೀಯ?
ಇದೇನಣ್ಣ? ಹೆಣ್ಣಿನ ಗೋಳು, ಗೋವಿನ ಗೋಳು, ಯಮನ ಸೋಲು ಅನ್ನ ನಾಟ್ಕದ ಯಸ್ರು ಕೇಳಿದ್ದೀನಿ, ಈ ಬೈರಪ್ಪನ ಗೋಳು ಅನ್ನ ನಾಟಕದ ಬಗ್ಗೆ ಕೇಳೂ ಇಲ್ಲ, ನೋಡೂ ಇಲ್ಲ. ಅದ್ಯಾವುದು ಏಳಣ್ಣ.
ದಿನಾ ಪೇಪ್ರ ಓದುತಾ ಇರು, ಆಗ ಗೊತ್ತಾಯ್ತದೆ.
ಪೇಪ್ರ ಓದ್ತಿನಿ, ಆದ್ರೂ ತಲಿಗೆ ವಳಿವಲ್ದಪ್ಪ.
ನಾನೇ ಏಳ್ತಿನಿ ಬುಡು. ನಮ್ ಸಂತೆಸಿವರದ ಬೈರಪ್ಪ ಗೊತ್ತೊ?
ಅದೆ ಕತೆ ಬರಿತಿತ್ರನಲ ಅವ್ನೆ?
ಊ ಕಣಣ್ಣ. ಅವ್ನೆಯ. ಅವೊತ್ತು ಊರ್ವಳಗ್ಯಲ್ಲ ಮ್ಯರ್ವಣಿಗೆ ಮಾಡ್ಳಿಲ್ವೆ ನಾವು?
ಆಯ್ತು ಮುಂದುಕ್ಕೇಳು.
ಅವ್ನು ಸತ್ಯ ಏಳೋ ಕತೆ-ಪುಸ್ತಕ ಬರುದ್ರೆ ಜನ ಒಪ್ತಾ ಇಲ್ಲ, ನಾನೇನ್ ಮಾಡ್ಳಿ ಅಂತವ ಪಂಕ್ಷನ್ ನಲಿ ಗೋಳೋ ಅಂತವ ಅತ್ನಂತೆ. ಅದ ಯಾರೋ ನಾಟ್ಕ ಬರಿಯೋನು ನೋಡಿ "ಬೈರಪ್ಪನಗೋಳು" ಅಂತ ಪುಸ್ತಕ ಬರುದ್ನಂತೆ! ಸಿಕ್ಕಾಪಟ್ಟೆ ಕಚ್ರಾಯ್ತಾ ಇದ್ದತಂತೆ!
ಸತ್ಯ ಅನ್ನದು ಇವತ್ತಲ್ಲ ನಾಳಿಕ್ಕೆ ಜನಗಳಿಗೆ ತಿಳಿತದಪ್ಪ, ಅದ್ಕೆ ಅವ್ನು ಅಳೋದ್ಯಾಕೆ?
ಏನಾಗ್ಯದೆ ಅಂದ್ರೆ ಇವ್ನು ಸತ್ಯ ಅನ್ನದ್ನ ಕ್ಯಲುವ್ರು ಸುಳ್ಳು ಅಂತರಂತೆ, ಅವ್ರು ಸತ್ಯ ಅನ್ನದ ಇವ್ನು ಸುಳ್ಳು ಅಂತನಂತೆ, ಅಲ್ಲೆ ಪ್ರಾಬ್ಲಮ್ಮು ಬಂದಿರದು!
ಸತ್ಯ ಅನ್ನದು ಒಂದೆ ಇರ್ಬೇಕಪ್ಪ, ಇವುನೇಳದೇನಂತೆ?
ನಮ್ ದೇಶದಲ್ಲಿ ಇವತ್ತು ಇರೋ ಪ್ರಾಬ್ಲಂ ಗಳಿಗೆ ಮುಸ್ಲಿಂ ರಾಜ್ರುಗಳು ಸರಿಯಾಗಿ ಕ್ಯಲ್ಸ ಮಾಡದೇ ಇದ್ದದ್ದೇ ಕಾರಣ, ಮುಸ್ಲಿಂ ರಿಗೆ ಸಕ್ರಾರ ಮಣೆ ಹಾಕ್ಬಾರ್ದು ಅನ್ನದು ಇವ್ನ ವಾದ್ವಂತೆ.
ಬ್ಯಾರೆರೇನ್ ಏಳ್ತರಂತೆ?
ಸನಾತನ ಧಮ್ರ ಅಂತ ಏಳ್ಕಂಡು ಕ್ಯಲುವ್ರೇ ಅದಿಕಾರ ನಡ್ಸಿದ್ರು. ದುಡಿಯೋ ಜನಗಳ್ನ ಕೀಳಾಗಿ ಕಂಡ್ರು. ಅಸಮಾನತೆ ಬ್ಯಳ್ಸಿದ್ರು. ಅದ್ರಿಂದ ನಮ್ ದೇಶ ಹಿಂದಕ್ಕೋಗ್ಯದೆ ಅಂತ ಏಳ್ತರೆ.
ಸಾಬ್ರಿಗೆ ಮಣೆ ಹಾಕದು ಅಂದ್ರೇನು?
ಇದ್ದೇ ಅಯ್ತಲಣ್ಣ, ಸಕ್ರಾರದಿಂದ ಏನಾದ್ರು ಹೆಲ್್ಪ ಮಾಡದು, ಯಗುಲ್ ಮ್ಯಾಕೆ ಕೈಯಾಕಿ ಮಾತಾಡ್ಸದು.
ತ್ವಂದ್ರೇಲಿ ಇರೋರಿಗೆ ಎಲ್್ಪ ಮಾಡದು, ಚನ್ನಾಗಿದ್ದೀಯ ಅಂತವ ಯಗುಲ್ ಮ್ಯಾಲೆ ಕೈಯಾಕಿ ಮಾತಾಡ್ಸಿದ್ರೆ ಇವ್ನಿಗೇನಂತೆ ತ್ವಂದ್ರೆ?
ಅದು ಅವ್ನ ತ್ವಂದ್ರೆ ಅಲ್ವಂತೆ. ಅವ್ನು ಒಂದ್ ಇಸ್ಕೂಲಲಿ ಓದ್ಯವ್ನೆ. ಅಲ್ಲಿ ಇದ್ನೇ ಏಳ್ಕೊಟ್ಟವ್ರೆ. ಅವ್ರು ಮಾತಾಡದೂ ಅದೆಯ, ಬರಿಯೋದೂ ಅದೆಯ.
ಅಂಗೇಳು ಮತ್ತೆ. ಜನಗಳ್ಯಲ್ಲ ಒಂದೆಯ ಅಂತರೆ, ಆದ್ರೆ ವಳಗ್ವಳಗೆ ಅವ್ನು ಇಂತನು, ನಂಬ ಬ್ಯಾಡಿ ಅಂತ ಏಳ್ಕೊಡ್ತರೆ, ಇದ್ರಿಂದ ಜನ ಕಿತ್ತಾಡ್ತಾ ಇತ್ರರೆ. ಅದ್ರಲ್ಲಿ ಇವ್ರು ಬ್ಯಾಳೆಕಾಳ ಬೇಯಿಸ್ಕತ್ತರೆ.
ಅಂಗಾರೆ ಈ ಬೈರಪ್ಪನ ಗೋಳು ಅನ್ನದು ಡೂಪ್ಲಿಕೇಟ್ ನಾಟ್ಕ ಅನ್ನು?
ನೋಡಣ್ಣ. ಯಾಯ್ರಾರು ಪಬ್ಲಿಕ್ ಮುಂದೆ ಗೋಳಾಡ್ತರೆ, ಅದ್ಯಲ್ಲ ಒಂತರ ಡೂಪ್ಲಿಕೇಟ್ ನಾಟಕ್ವೆಯ. ನೀನು ಉಸಾರಾಗಿರು! ಅಯ್ಯೋ ಪಾಪ ಅನ್ನಕೋಗ್ ಬ್ಯಾಡ!
- ಈ.ಬಸವರಾಜು
No comments:
Post a Comment